ಕೆಂಪೇಗೌಡ 1

ಆವತಿ ಪ್ರಭುಗಳಲ್ಲೊಬ್ಬನಾದ ಯಲಹಂಕ ಪ್ರಭು ಜಯಗೌಡನ ವಂಶಜ ಮತ್ತು ಬೆಂಗಳೂರು ನಗರದ ಸ್ಥಾಪಕ. 1513 ರಿಂದ 1569ರ ವರೆಗೆ ಮಾಗಡಿಯ ಪಾಳೆಯಗಾರನಾಗಿದ್ದ. ಈತ ಪ್ರಜಾರಂಜಕ. ವಿಜಯನಗರದ ಸಾಮಂತ. ಕೃಷ್ಣದೇವ ಮತ್ತು ಅಚ್ಯುತರಾಯರ ಪ್ರೀತಿ ಗಳಿಸಿದ್ದ. ತನ್ನ ರಾಜಧಾನಿಯಾಗಿದ್ದ ಮಾಗಡಿಯಿಂದ ಹೊರಟು ಹೊಸದೊಂದು ರಾಜಧಾನಿಗಾಗಿ ನೆಲೆಯನ್ನರಸುತ್ತಿದ್ದಾಗ ಒಂದು ಮೊಲ ಈತನ ಬೇಟೆಯ ನಾಯಿಯನ್ನು ಎದುರಿಸಿತೆಂದೂ ಆ ಸ್ಥಳವೇ ರಾಜಧಾನಿಗೆ ಸೂಕ್ತವೆಂದು ನಿಶ್ಚಯಿಸಿ ಅಲ್ಲಿ ದುರ್ಗದ ಅಡಿಪಾಯವನ್ನು ಸ್ಥಾಪಿಸಿದನೆಂದೂ ಅದೇ ಬೆಂಗಳೂರೆಂದೂ ಹೇಳಲಾಗಿದೆ. ಆ ಮೊದಲೇ ಅಲ್ಲಿ ಒಂದು ಊರು ಇದ್ದಿರಬಹುದೆಂದೂ ಈತ ಅದನ್ನು ಜೀರ್ಣೋದ್ಧಾರ ಮಾಡಿ 1537ರಲ್ಲಿ ಅಲ್ಲೊಂದು ಕೋಟೆಯನ್ನು ಕಟ್ಟಿಸಿದನೆಂದೂ ತಿಳಿದುಬರುತ್ತದೆ. ನಗರದ ನಾಲ್ಕು ದಿಕ್ಕುಗಳಲ್ಲೂ ಆತ ನಿರ್ಮಿಸಿದ ಕಾವಲುಗೋಪುರಗಳು ಈಗಲೂ ಇವೆ. ಕೋಟೆಯ ನಿರ್ಮಾಣಕಾಲದಲ್ಲಿ ಅದರ ಮಹಾದ್ವಾರ ನಿಲ್ಲಲಿಲ್ಲವೆಂದೂ ಅದಕ್ಕೆ ನರಬಲಿ ಅಗತ್ಯವಾಗಿದ್ದುದರಿಂದ ಕೆಂಪೇಗೌಡನ ಸೊಸೆ ಆತ್ಮಬಲಿ ದಾನ ಮಾಡಿಕೊಂಡಳೆಂದೂ ಅನಂತರ ದ್ವಾರ ನಿಂತಿತೆಂದೂ ಒಂದು ಐತಿಹ್ಯವುಂಟು. ಅಚ್ಯುತರಾಯನಿಂದ ಬಳುವಳಿಯಾಗಿ ಬಂದ 12 ಹೋಬಳಿಗಳನ್ನು ಕೆಂಪೇಗೌಡ ಬೆಂಗಳೂರಿಗೇ ಸೇರಿಸಿ ಆ ಊರು ಬೆಳೆಯಲು ಕ್ರಮ ಕೈಗೊಂಡ. ಅಲ್ಲಿ ಬಸವನಗುಡಿಯನ್ನೂ ಗವಿ ಗಂಗಾಧರೇಶ್ವರನ ಮತ್ತು ವೆಂಕಟರಮಣಸ್ವಾಮಿಯ ದೇವಾಲಯಗಳನ್ನೂ ನಿರ್ಮಿಸಿದವನೀತನೇ. ಅಲ್ಲಿ ಒಂದು ಟಂಕಸಾಲೆಯನ್ನು ಸ್ಥಾಪಿಸಿ ಭೈರವನಾಣ್ಯಗಳನ್ನು ಅಚ್ಚು ಮಾಡಲು ಕೆಂಪೇಗೌಡನಿಗೆ ಸಮ್ರಾಟನ ಒಪ್ಪಿಗೆ ದೊರಕಿತ್ತು. 1550ರಲ್ಲಿ ಶಿವಗಂಗೆ ಪ್ರದೇಶ ಕೆಂಪೇಗೌಡನಿಗೆ ವಶವಾಯಿತು. ಅಲ್ಲಿಯ ದೇವಾಲಯಗಳನ್ನೂ ಈತ ಜೀರ್ಣೋದ್ಧಾರ ಮಾಡಿಸಿದ.

ಸದಾಶಿವರಾಯ ವಿಜಯನಗರದ sಸಾಮ್ರಾಟನಾದ ಅನಂತರ ಜಗದೇವರಾಯನೆಂಬ ಸಾಮಂತ ಆಸ್ಥಾನದಲ್ಲಿ ಪ್ರಬಲನಾಗಿದ್ದ. ಅವನು ಕೆಂಪೇಗೌಡನ ವಿರುದ್ಧ ಪಿತೂರಿ ನಡೆಸಿ ಅವನನ್ನು ಸೆರೆಮನೆಗೆ ತಳ್ಳಿಸಿ ತಾನೇ ಯಲಹಂಕನಾಡಿನ ನಾಯಕನಾದ. ಆದರೆ ಸರ್ವಾಧಿಕಾರಿ ಅಳಿಯ ರಾಮರಾಯ ಇವನ ಬಿಡುಗಡೆಗಾಗಿ ಸಂಧಾನ ನಡೆಸಿದ. ಕೆಂಪೇಗೌಡನ ಸ್ವಾಮಿಭಕ್ತಿಯೂ ನಿಷ್ಠೆಯೂ ಸದಾಶಿವರಾಯನಿಗೆ ಮನವರಿಕೆಯಾದುವು. 5 ವರ್ಷಗಳ ಅನಂತರ ಕೆಂಪೇಗೌಡನಿಗೆ ವಿಮೋಚನೆ ದೊರಕಿತು. 

ಕೆಂಪೇಗೌಡನಿಗೆ ಶೈವಮತದಲ್ಲಿ ಹೆಚ್ಚಿನ ಪ್ರೀತಿ ಇತ್ತೆಂದು ಕಾಣುತ್ತದೆ. ಈತ ಅನೇಕ ಶಿವಾಲಯಗಳನ್ನು ಕಟ್ಟಿಸಿದ್ದಾನೆ. ಆದರೂ ಎಲ್ಲ ಮತಗಳಿಗೂ ಸಮಾನವಾಗಿ ಪ್ರೋತ್ಸಾಹ ನೀಡುತ್ತಿದ್ದ. ಪ್ರಜಾಹಿತರಕ್ಷಣಯೇ ಈತನ ಮುಖ್ಯ ಗುರಿಯಾಗಿತ್ತು. ಈತ ಸುವ್ಯವಸ್ಥಿತವಾಗಿ ಧರ್ಮದಿಂದ ಆಡಳಿತ ನಡೆಸುತ್ತಿದ್ದ. 1569ರಲ್ಲಿ ಮರಣ ಹೊಂದಿದ. 			
(ಕೆ.ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ